ಪ್ರೀತಿಯ ಪಪ್ಪನಿಗೆ.. ಓಹ್!! Sorry.. ನನ್ನ ಪಪ್ಪನೆನಿಸಿಕೊಂಡವನಿಗೆ ನಿನ್ನ ಮಗಳು ಮಾಡುವ ನಮಸ್ಕಾರಗಳು..
          ಹೇಗಿದ್ದೀಯ? ಅಂತ ನಾ ಕೇಳೊಲ್ಲ.. ನಂಗೊತ್ತು ನೀನು ನಿನ್ನ ವ್ಯವಹಾರಗಳ ಮಧ್ಯೆ ಚೆನ್ನಾಗೇ ಇರುತ್ತೀಯ.. ಕುಟುಂಬ , ಸ್ನೇಹಿತರು, ಬಂಧುಗಳೆಲ್ಲರಿಗಿಂತಲೂ ನಿನಗೆ ಹೆಚ್ಚು ಅಗತ್ಯವಾದುದು ಅದೇ ಅಲ್ಲವೇ? ಕೇಳಿ ಕೇಳಿ ಬೇಸತ್ತು ಹೋಗಿರಬಹುದು ನಿನಗೆ ಈ ಮಾತುಗಳನ್ನ.. ಅದಕ್ಕೇ ಕೆಲವು ಹೊಸ ಮಾತುಗಳನ್ನು ಹೇಳಲು ಪತ್ರ ಬರೆಯುತ್ತಿದ್ದೇನೆ. ಓದಲಾದರೂ ೫ ನಿಮಿಷ ಬಿಡುವು ಮಾಡಿಕೊಳ್ಳುತ್ತೀಯ ಎಂದು ನಂಬಿರುತ್ತೇನೆ..

           ಬಾಲ್ಯದ  ದಿನಗಳೇ ಸುಂದರ ಎನ್ನುತ್ತಾರೆ.. ಹೆತ್ತವರೊಂದಿಗಿನ ಒಡನಾಟ,ಬಂಧುಗಳ ಜೊತೆಗಿನ ತುಂಟಾಟ….. ಆದರೆ ಯಾವೊಂದೂ ನನಗೆ ದೊರೆಯದಂತೆ ಮಾಡಿಬಿಟ್ಟೆಯಲ್ಲಾ? ಹುಟ್ಟಿಸಿದ ನಂತರ ಒಂದು ದಿನವಾದರೂ ನನ್ನ ಎತ್ತಿ ಮುದ್ದಿಸಿದ್ದೀಯಾ? ಬೆನ್ನ ಮೇಲೆ ಕೂರಿಸಿ ಕೂಸುಮರಿ ಆಡಿಸಿದ್ದೀಯ? ಕನಿಷ್ಟ ಪಕ್ಷ ದಿನದಲ್ಲೊಂದು ಬಾರಿ ನನ್ನ ಮುಖ ನೋಡಲಾದರೂ ಮನಸು ಮಾಡಿದ್ದೆಯಾ? ಅದೂ ಇಲ್ಲ.. ನಾನು ಏಳುವುದಕ್ಕಿಂತ ಮೊದಲೇ ಮನೆ ಬಿಡುತ್ತಿದ್ದ ಮತ್ತೆ ಕಾಲಿಡುವಾಗ ಮಧ್ಯರಾತ್ರಿ ಕಳೆದಿರುತ್ತಿತ್ತು. ಮನೆಯೆಂದರೆ ಬರೀ ನಿರ್ಲ್ಯಕ್ಷ್ಯ, ತಿರಸ್ಕಾರ……
            “ನನ್ನಮ್ಮ. . . .” ದೇವತೆ ಅವಳು.. ನೀನು ಕಟ್ಟಿಸಿದ್ದ ಆ ಸುಂದರ ಬಂಗಲೆ ಅನ್ನೋ ಪ್ರಪಂಚದೊಳಗೆ ನನಗೆ ಅವಳು.. ಅವಳಿಗೆ ನಾನು… ಅಪ್ಪನ ವಾತ್ಸಲ್ಯದ ಅರಿವೇ ಇರದಿದ್ದವಳಿಗೆ ಸರ್ವಸ್ವವೂ ಆಗಿದ್ದಾಕೆ… ಒಂದು ರೀತಿಯಲ್ಲಿ ನಾನೂ ಆಕೆಗೆ ಹಾಗೆಯೇ ಆಗಿದ್ದೆನೇನೋ…? ಮೆತ್ತನೆಯ ಮಡಿಲು, ಇಂಪಾದ ಜೋಗುಳದ ದನಿ, ಆಸರೆಯಾಗಿ ನಿಂತು ಹೆಜ್ಜೆ ಹಾಕಿಸುತ್ತಿದ್ದ ಆಕೆಯ ಮಮತೆ…. ಆ ನೆನಪುಗಳು ಇಂದಿಗೂ ನನ್ನಲ್ಲಿ ಬೆಚ್ಚಗಿವೆ ಪಪ್ಪಾ… ಒಂದು ಕ್ಷಣವೂ ಒಬ್ಬರೊನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯತೆ ಇತ್ತು ನಮ್ಮಲ್ಲಿ…

            ಆದರೆ ಏನ್ಮಾಡಿದೆ ನೀನು..? ಅಮ್ಮನ ವಿಶ್ರಾಂತಿಯ ನೆಪವೊಡ್ಡಿ ನನ್ನನ್ನು ದೂರದ ಹಾಸ್ಟೆಲ್ ಗೆ ಸೇರಿಸಿದೆ. ಆಧಾರವಾಗಿದ್ದ ಏಕೈಕ ಪ್ರೀತಿಯ ಸೆಲೆಯನ್ನೂ ಕಿತ್ತುಕೊಂಡೆ.. ನಿನಗೆಂದೂ ಎದುರು ಮಾತಾಡದ ಅಮ್ಮ ಅಸಹಾಯಕಳಾಗಿ ಕಣ್ಣೀರು ತುಂಬಿ ಕೈ ಬೀಸುತ್ತಿದ್ದರೆ ಜಗತ್ತನ್ನೇ ಬಿಟ್ಟು ಹೋಗುತ್ತಿರುವೆನೇನೋ ಎಂಬ ಭಯ.. ಯಾಕಪ್ಪಾ ಯಾವೊಂದೂ ಭಾವನೆಗಳೂ ನಿನಗೆ ಅರ್ಥವಾಗದೇ..??

           ಇಷ್ಟೆಲ್ಲಾ ಮಾಡಿದ ನೀನು ಎಂಟು ವರ್ಷಗಳಲ್ಲಿ ಒಮ್ಮೆಯಾದರೂ ನನ್ನ ನೋಡಲು ಬಂದೆಯಾ? ಇಲ್ಲ.. ಪ್ರತೀಬಾರಿ ಅಮ್ಮ ಬಂದಾಗಲೂ ನಿನ್ನ ಬಗ್ಗೆ ಕೇಳುತ್ತಿದ್ದೆ.. ಕ್ರಮೇಣ ನಾನೇ ಬಿಟ್ಟುಬಿಟ್ಟೆ ಕೇಳೋದನ್ನ.. ಬೇರೆ ಮಕ್ಕಳು ತನ್ನ ತಂದೆ ಜೊತೆ ಆಡೋದನ್ನ ನೋಡಿದಾಗ ಹೃದಯ ಹಿಂಡಿದಂತಾಗುತ್ತಿತ್ತು.. ತಪ್ಪು ಮಾಡಿದಾಗ ಬೈದು, ಹೊಡೆಯಲಾದರೂ ಅಪ್ಪ ಬರಬಾರದೇ..? ಎಂದು ಎಷ್ಟೋ ಬಾರಿ ಅಮ್ಮನ ತೊಡೆ ಮೆಲೆ ಮಲಗಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.. ತಲೆ ಸವರಿ ಸಾಂತ್ವನಿಸುತ್ತಿದ್ದ ಕ್ಷಣ ತಡೆಯಲಾರದೇ ಆಕೆಯ ಕಂಗಳಿಂದ ಉರುಳಿ ನನ್ನ ಕೆನ್ನೆ ಮೇಲೆ ಬಿದ್ದ ಕಂಬನಿಯ ಬಿಸಿ ಮರೆಯಲಾದೀತೇ ಪಪ್ಪಾ..? ನಿನಗ್ಯಾವಾಗ ಅರಿವಾಗುತ್ತೆ ನಮ್ಮ ಈ ವೇದನೆ…??

            ಆದರೆ ಪಪ್ಪಾ ಇನ್ನು ನಿನ್ನಿಂದ ನಾನು ಏನನ್ನೂ ಅಪೇಕ್ಷಿಸಲಾರೆ.. ತಂದೆಯಿಲ್ಲದ ಬದುಕಿಗೆ ಎಂದೋ ಒಗ್ಗಿಕೊಂಡು ಬಿಟ್ಟಿದ್ದೇನೆ.. ಮನಸ್ಸು ಕಲ್ಲಾಗಿ ಹೋಗಿದೆ ಪಪ್ಪಾ.. ನೋವು, ಹತಾಷೆಗಿಂತ ಹೆಚ್ಚಾಗಿ ನಿನ್ನ ಬಗ್ಗೆ ತಿರಸ್ಕಾರವಿದೆ… ನಿನ್ನ ಈ ಬ್ಯುಸಿ ವ್ಯಾವಹಾರಿಕ ಬದುಕಿನಲ್ಲಿ ನಿನ್ನ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ.. ಅಂದ ಹಾಗೆ ಹೇಳೋಕೆ ಬಂದ ವಿಷಯಾನೇ ಮರೆತುಬಿಟ್ಟೆ.. ಸುಖವಾಗಿದ್ದಾಳೆ ಅಂತ ನಂಬಿಕೊಂಡಿರೋ ನಿನ್ನ ಹೆಂಡತಿ ಅಂದರೆ ನನ್ನಮ್ಮ ಬ್ಲಡ್  ಕ್ಯಾನ್ಸರ್ ನಿಂದ ನರಳುತ್ತಿದ್ದಾಳೆ.. ಇನ್ನು ಕೆಲವೇ ತಿಂಗಳುಗಳಷ್ಟೇ ಅವಳು ಬದುಕಿರುತ್ತಾಳೆ.. ಉಳಿದಿರೊ ದಿನಗಳಲ್ಲಾದರೂ ಆಕೆ  ಸಂತೋಷವಾಗಿರುವಂತೆ ನೋಡಿಕೋ.. ದಯವಿಟ್ಟು ಪ್ರೀತ್ಸೋದನ್ನ ಕಲಿ ಪಪ್ಪಾ… ಕಡೇ ಪಕ್ಷ ನಿನ್ನ ಹೆಂಡತಿಯನ್ನಾದರೂ….!
      

                      ಕೊನೆಯ ವಿದಾಯಗಳೊಂದಿಗೆ….

                                                                       ಇಂತೀ ನಿಮ್ಮ ಮಗಳಾಗಿದ್ದ 
                                                                               ಚಿನ್ನು