rain-drops

ಸಂಜೆ ೪.೩೦ ಸಮಯ. ಎಂದಿನಂತೆ ಅಂಗಳದಲ್ಲಿದ್ದ ಸಂಪಿಗೆ ಮರದಡಿ ಕುರ್ಚಿಯಲ್ಲಿ ಕುಳಿತು ಇಯರ್ ಫೋನ್ ನಲ್ಲಿ F.M ಆಲಿಸುತ್ತಿದ್ದೆ. ಹೀಗಿರುವಾಗ ಕೆಲವು ನಿಮಿಷಗಳ ಬಳಿಕ ತಣ್ಣನೆ ಗಾಳಿ ಬೀಸಲು ಆರಂಭವಾಯಿತು. ನಮ್ಮ ಮನೆ ಸ್ವಲ್ಪ ಎತ್ತರ ಪ್ರದೇಶದಲ್ಲಿರುವುದರಿಂದ ಗಾಳಿಯ ವೇಗ ಹೆಚ್ಚಾಗೇ ಇತ್ತು. ತಂಪನೆಯ ಗಾಳಿ ಮೈಗೆ ಸೋಕುತ್ತಿದ್ದಂತೆ ಏನೋ ಮಧುರ ಅನುಭವ…
ತಣ್ಣನೆಯ ಗಾಳಿಗೆ ಮೈಯ್ಯೊಡ್ಡಿ ಹಾಡು ಆಲಿಸುತ್ತಾ ಕುಳಿತಿದ್ದವಳಿಗೆ ಬಾನು ಕಪ್ಪಿಟ್ಟದ್ದೇ ಅರಿವಿಗೆ ಬರಲಿಲ್ಲ. ಇದ್ದಕ್ಕಿದ್ದಂತೆ ಪುಟ್ಟ ಮಳೆ ಹನಿಯೊಂದು ಮುತ್ತಿಕ್ಕಿದಂತಾಯಿತು. ಒಂದು ಕ್ಷಣ ಮೈಮನವೆಲ್ಲಾ ಪುಳಕಗೊಂಡಿತ್ತು. ಅಂತೂ ನನ್ನ ಪ್ರೀತಿಯ ಮಳೆರಾಯ ಮುನಿಸು ತೊರೆದು ಬಂದೇ ಬಿಟ್ಟ….
ನೋಡನೋಡುತ್ತಿದ್ದಂತೆ ಮೋಡ ಕರಗಿ ಧರೆಗಿಳಿಯಲು ಆರಂಭವಾಯಿತು. ಇದುವರೆಗೂ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಇಳೆ ತನ್ನೆಡೆಗೆ ಧಾವಿಸಿ ಬರುತ್ತಿರುವ ತುಂತುರು ಹನಿಗಳನ್ನು ಸಂತಸದಿಂದ ಸ್ವಾಗತಿಸುತ್ತಿತ್ತು. ಮಳೆ ಹನಿಗಳೂ ಅಷ್ಟೇ ವೈಯ್ಯಾರದಿಂದ ಇಳಿದು ಬಂದು ಭೂಮಿಯ ಮಡಿಲು ಸೇರುತ್ತಿತ್ತು. ಬಾಡಿ ನಿಸ್ತೇಜಗೊಂಡಿದ್ದ ಗಿಡ-ಮರಗಳಲ್ಲಿ ಮಳೆರಾಯನ ಸ್ಪರ್ಶ ಸೆಟೆದು ನಿಲ್ಲುವ ಹುರುಪು ಹುಟ್ಟಿಸುತ್ತಿತ್ತು.
ಯಾಕೋ ಮನೆಯೊಳಕ್ಕೆ ಹೋಗಲು ಮನಸ್ಸೇ ಬರಲಿಲ್ಲ. ಆದರೆ ಅಮ್ಮನ ಕರೆ ಜೋರಾಗಿತ್ತು. ಒಲ್ಲದ ಮನದಿಂದ ನಿಧಾನವಾಗಿ ಹೆಜ್ಜೆಯಿಡುತ್ತಾ ಮನೆ ಕಡೆ ಸಾಗಿದೆ.. ಅಷ್ಟಾದರೂ ಒದ್ದೆಯಾಗುವ ಆಸೆ..!! ಅಂತೂ ಮನೆಯೊಳಗೆ ಬಂದು ಪೆಚ್ಚಾಗಿ ಕೂತೆ.. ಅಮ್ಮ ನನ್ನ ಮುಖ ನೋಡಿ “ಮೊದಲ ಮಳೆಗೆ ನೆನೀಬೆಡ ಪುಟ್ಟಾ, ಜ್ವರ ಬರುತ್ತೆ” ಅಂದರು. ನಿರಾಸೆಯಿಂದ ತಲೆಯಲ್ಲಾಡಿಸಿದೆ…
ಬೇರೇನೂ ಮಾಡಲಾಗದೆ ಮಳೆಯ ಸೊಬಗನ್ನಾದರೂ ಸವಿಯೋಣವೆಂದು ಹಜಾರದಲ್ಲಿ ಕುರ್ಚಿ ಹಾಕಿ ಕುಳಿತೆ.. ಮಳೆರಾಯ ಈಗ ತನ್ನ ನಾಚಿಗೆಯನ್ನೆಲ್ಲಾ ತೊರೆದು ಪಿ.ಟಿ. ಉಷಾಳ ವೇಗದಲ್ಲಿ ಬಿರುಸಾಗಿ ಬರಲು ಆರಂಭಿಸಿದ್ದ..!! ಸುತ್ತಲೂ ಮಳೆಯ ಕಲರವ ಬಿಟ್ಟು ಇನ್ನೇನೂ ಕೇಳಿಸುತ್ತಿಲ್ಲ. ಪಟ್ಟಣ ಬಿಟ್ಟು ಹಳ್ಳಿಗೆ ಬಂದು ನೆಲೆಸಿದ್ದ ನನಗೆ ಹಳ್ಳಿಯಲ್ಲಿ ಇದೇ ಮೊದಲ ಮಳೆಗಾಲ. ಬಲು ರಮಣೀಯ ನೋಟ… ಮೆಲ್ಲಗೆ ಮನೆಯೊಳಗೇ ನಿಂತು ಕೈಯ್ಯನ್ನ ಹೊರಗಡೆ ಚಾಚಿದೆ.. ಬೊಗಸೆ ತುಂಬಾ ನೀರು ತುಂಬಿಕೊಂಡು ಇನ್ನೊಬ್ಬರ ಮೇಲೆ ಎರಚುತ್ತಾ ಆಡಲು ಏನೋ ಉಲ್ಲಾಸ… ಯಾಕೋ ಮನಸ್ಸು ತಡೆಯಲಿಲ್ಲ ಸಲ… ಅಣ್ಣನಲ್ಲಿ “ಆಣ್ಣಾ.. ಜ್ವರ ಬಂದ್ರೆ ಟಾಬ್ಲೆಟ್ಸ್ ಇದ್ಯಲ್ಲಾ..?” ಎಂದು ಹೇಳಿ ಅಂಗಳಕ್ಕೆ ಜಿಗಿದೇ ಬಿಟ್ಟೆ..!
ನನ್ನ ಹಿಂದೆಯೇ  ಓಡಿ ಬಂದಿತ್ತು ನನ್ನ ಮುದ್ದು ನಾಯಿ ಜಾನಿ.. ನನ್ನ ಸಂಭ್ರಮ ಕಂಡು ಅದಿಕ್ಕೂ ಹುಮ್ಮಸ್ಸು ಬಂದಿರಬೇಕು.. ಮಳೆ, ಚಳಿ ಎಂಬ ಯಾವ ಚಿಂತೆಯೂ ಇಲ್ಲದೆ ಕುಣಿದು ಕುಪ್ಪಳಿಸತೊಡಗಿತ್ತು.. ಈಗ ನಮ್ಮಿಬ್ಬರನ್ನು ಹಿಡಿಯುವವರೇ ಇರಲಿಲ್ಲ..! ಮೊದಲಿದ್ದ ಊರಲ್ಲಿ ಇದಕ್ಕೆಲ್ಲಾ ಅವಕಾಶಾನೆ ಇರಲಿಲ್ಲ.. ಮನಸೋ ಇಛ್ಚೆ ನೆನೆದು ಖುಶಿಪಟ್ಟೆ.. ನಂತರ ಮಳೆರಾಯನ ಆರ್ಭಟ ಕಡಿಮೆಯಾಗತೊಡಗಿತು.. ನಾನೂ ಅಂಗಳದಿಂದ ಮೆಲ್ಲಗೆ ಮನೆಯೊಳಕ್ಕೆ ಸೇರಿದೆ… 
ಅಷ್ಟರವರೆಗೂ ಇರದಿದ್ದ ಚಳಿ ಮನೆಯೊಳಗೆ ಸೇರುತ್ತಿದ್ದಂತೆ ಥರಗುಟ್ಟಲು ಆರಂಭಿಸಿತ್ತು..! ಸಣ್ಣಗೆ ನಡುಗುತ್ತಾ ನಿಂತಿದ್ದ ನನ್ನೆಡೆಗೆ ಅಮ್ಮ ನಗುತ್ತಾ ಟವೆಲ್ ತಂದು ಕೊಟ್ಟರು. ನನ್ನ ಮೊಗದಲ್ಲಿ ಏನನ್ನೋ ಸಾಧಿಸಿದ ಹುರುಪು..! ಅಷ್ಟರಲ್ಲಾಗಲೇ ಅಮ್ಮ ಅಡಿಗೆ ಕೋಣೆಯಲ್ಲಿ ಯಾವುದೋ ಕೆಲಸದಲ್ಲಿ ಮಗ್ನಳಾಗಿದ್ದಳು.. ನಾನು ತಲೆಯೊರಸಿ,ಉಡುಪು ಬದಲಾಯಿಸಿ ಬರುವ ವೇಳೆಗೆ ಮಳೆ ಮಾಯವಾಗಿತ್ತು..!

ಇಷ್ಟಾದರೂ ಅದು ಮಾಡಿ ಹೋಗಿದ್ದ ಚೆಲುವು ಮಾಸಿರಲಿಲ್ಲ.. ನಿಜವಾದ ಸೌಂದರ್ಯವಿರುವುದೇ ಮಳೆ ನಿಂತ ಬಳಿಕ.. ಚಿಗುರೆಲೆಗಳ ತುದಿಯಲ್ಲಿ, ಹೂ ದಳಗಳ ತುದಿಯಲ್ಲಿ ಈಗ ಬಿದ್ದುಬಿಡುವುದೇನೋ ಎಂಬಂತೆ ನಾಟ್ಯವಾಡುತ್ತಾ ನಿಂತಿರುವ ನೀರ  ಬಿಂದುಗಳನ್ನು ನೋಡುವುದರಲ್ಲೇ ಏನೋ ಆನಂದ… ಆ ಪ್ರಕೃತಿ ಮಡಿಲ ನಡುವೆ ಮೈ ಮರೆತು ನಿಂತಿದ್ದವಳನ್ನು ಎಚ್ಚರಿಸಿದ್ದು ಮತ್ತೆ ಅಮ್ಮನ ಕರೆ.. ಎಲ್ಲರೂ ಹಾಲ್ ನಲ್ಲಿ ನನಗಾಗಿ ಕಾದು ಕುಳಿತಿದ್ದರು.. ಅಮ್ಮ ಬಿಸಿ ಬಿಸಿ ಹಾಲು, ಗರಿ ಗರಿಯಾದ ಚಕ್ಕುಲಿ-ಕೋಡುಬಳೆ ತಂದು ಟೇಬಲ್ ನಲ್ಲಿಟ್ಟರು.. ಪಪ್ಪ “ನೀನು ಮಳೇಲಿ ನೆನೆದ್ರೆ ನಮ್ಗೆ ಇದೆಲ್ಲಾ  free..!” ಎಂದು ಛೇಡಿಸಿದಾಗ ಎಲ್ಲರೂ ನನ್ನತ್ತ ನೋಡಿ ನಕ್ಕರು.. ನಾನೂ ನಗುತ್ತಾ ಅವರ ಸಂಭ್ರಮದಲ್ಲಿ ಭಾಗಿಯಾದೆ… ಈಗ ನಿಮ್ಗೂ ಬಿಸಿ ಬಿಸಿ ಚಕ್ಕುಲಿ-ಕೋಡುಬಳೆ ತಿನ್ಬೇಕು ಅಂತ ಅನಿಸ್ತಿದ್ಯಾ..?? ಅಂದ್ರೆ ಬನ್ನಿ ನನ್ಜೊತೆ ಮಳೇಲಿ ನೆನೆಯೋಕೆ…!!!