the end


ಸುಧಾಕರ್ ಚಿಂತೆಯಿಂದ ಮನೆ ಗೇಟಿನ ಬಳಿ ಅತ್ತಿಂದಿತ್ತ ತಿರುಗುತ್ತಾ ಶತಪಥ ಹಾಕುತ್ತಿದ್ದ. ಘಂಟೆ ಮಧ್ಯಾಹ್ನ ೧೨ ಆದರೂ ಪರೀಕ್ಷೆ ಫಲಿತಾಂಶ ತಿಳಿಯಲು ಹೋದ ಮಗಳು ಸ್ನೇಹ ಹಾಗೂ ಅವಳ ಗೆಳತಿ ಮಾನಸಿ ಇನ್ನೂ ಬಂದಿರಲಿಲ್ಲ. ಇದು ಅವನನ್ನು ಗಾಬರಿಗೀಡು ಮಾಡಿತ್ತು.
ಸ್ನೇಹ, ಮಾನಸಿ ಇಬ್ಬರೂ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು. ಇಬ್ಬರಿಗೂ ಮುಂದೆ ಮೆಡಿಕಲ್ ಓದುವ ಆಸೆ. ಸ್ನೇಹ ಅನುಕೂಲಸ್ಥ ಕುಟುಂಬದವಳು. ಆದ್ದರಿಂದ ಅವಳ ಓದಿಗೆ ಏನೂ ತೊಂದರೆಯಿಲ್ಲ. ಆದರೆ ಮಾನಸಿ ಮಧ್ಯಮ ವರ್ಗದವಳು. ಒಳ್ಳೆ ಅಂಕ, ವಿದ್ಯಾರ್ಥಿ ವೇತನಗಳೇ ಅವಳಿಗೆ ಆಧಾರ. ಹಾಗೆ ನೋಡಿದರೆ ಓದಿನಲ್ಲಿ ಮಾನಸಿಯೇ ಸ್ನೇಹಾಳಿಗಿಂತ ಜಾಣೆ.  ಮಗಳನ್ನು ಓದಿಸಲು ಸ್ವಲ್ಪವೂ ಮನಸಿರದ ಕೋಪಿಷ್ಠ ಮಾನಸಿಯ ತಂದೆಯನ್ನು ಸುಧಾಕರನೇ ಸಮಾಧಾನ ಪಡಿಸಿ ಒಪ್ಪಿಸಿದ್ದ. ಹಾಗೆ ಇಂದು ಫಲಿತಾಂಶ ತಿಳಿಯಲು ಬಲು ಉತ್ಸಾಹದಿಂದ ಹೊರಟಿದ್ದ ಮಕ್ಕಳು ಮಧ್ಯಾಹ್ನವಾದರೂ ಹಿಂದಿರುಗದಿದ್ದಾಗ ಗಾಬರಿಗೊಂಡಿದ್ದ.

ಅಷ್ಟರಲ್ಲಿಯೇ ದೂರದಲ್ಲಿ ಭಾರವಾದ ಹೆಜ್ಜೆಗಳೊಂದಿಗೆ ಬರುತ್ತಿರುವ ಮಕ್ಕಳನ್ನು ಕಂಡು ನೆಮ್ಮದಿಯಾಯಿತು. ಆದರೆ ಅವರ ಕಂದಿದ ಮುಖ ಕಂಡು ಭಯವಾಯಿತು. ಇಬ್ಬರೂ ಸುಧಾಕರನನ್ನು ಸಮೀಪಿಸಿದರು. ಸುಧಾಕರ ಎನಾಯಿತು ಎಂಬಂತೆ ಮಗಳ ಮುಖ ನೋಡಿದ. “ಪಪ್ಪಾ.. ನಾನು ೮೪% ದೊಂದಿಗೆ ಪಾಸಾದೆ. ಆದ್ರೆ ಮಾನಸಿದು ಮಾಥ್ಸ್ ನಲ್ಲಿ ೨೯ ಮಾರ್ಕ್ಸ್ ಬಂದು ಹೊಗ್ಬಿದ್ತು. ೯೦ ಕ್ಕಿಂತ ಜಾಸ್ತಿ ಬರ್ಬೊದು ಅಂತಿದ್ಲು. ಬಾಕಿ ಎಲ್ಲ ವಿಷಯದಲ್ಲೂ ೯೦ ಕ್ಕಿಂತ ಜಾಸ್ತಿ ತೆಗ್ದಿದ್ದಾಳೆ. ಯಾಕೆ ಹೀಗಾಯ್ತು ಅಂತಾನೆ ಅರ್ಥ ಆಗ್ತಿಲ್ಲ. ನಂಗನ್ಸುತ್ತೆ ಮೌಲ್ಯಮಾಪನದಲ್ಲೆ ಏನೋ ತಪ್ಪಾಗಿರ್ಬೆಕು” ಎಂದು ಉಸುರಿದಳು.
ಸುಧಾಕರ ಮಾನಸಿಯತ್ತ ತಿರುಗಿದ. ತಲೆ ತಗ್ಗಿಸಿ ನಿಂತಿದ್ದ ಅವಳು ತುಂಬಾ ಖಿನ್ನಳಾಗಿದ್ದಂತೆ ತೋರುತ್ತಿತ್ತು. ಮೆಲ್ಲನೆ ಅವಳ ತಲೆ ನೇವರಿಸುತ್ತಾ ” ಚಿಂತೆ ಬಿಡು ಕಂದ, ಮೌಲ್ಯಮಾಪನದಲ್ಲಿ ಏನೋ ತಪ್ಪು ನಡೆದಿರಬೇಕು. ನಾನು ಮರು ಮೌಲ್ಯ ಮಾಪನಕ್ಕೆ ಹಾಕ್ತೇನೆ. ನೀ ನೊಂದ್ಕೊಬೇಡ. ನಿನ್ನ ಕನಸು ಖಂಡಿತ ಈಡೇರುತ್ತೆ” ಎಂದ ಮಮತೆಯಿಂದ. ಮಾನಸಿ ನಡುಗುವ ದನಿಯಿಂದ ” ನಂಗೆ ಮನೆಗೆ ಹೋಗಲು ಭಯ ಆಗುತ್ತೆ ಅಂಕಲ್ ” ಅಂದಳು. ” ಭಯ ಪಡ್ಬೇಡ ಪುಟ್ಟಾ,  ಕೆಟ್ಟದು ಏನೂ  ಆಗೊಲ್ಲ.. ನಿಂಗೆ ಒಳ್ಳೆ ಮಾರ್ಕ್ಸ್ ಖಂಡಿತಾ ಬಂದಿರುತ್ತೆ.. ಹೆದ್ರಿಕೆ ಬಿಟ್ಟು ಮನೆಗೆ ಹೋಗು ಚಿನ್ನಾ..” ಎಂದ. ಸಣ್ಣಗೆ ತಲೆಯಾಡಿಸಿ ಮಾನಸಿ ತನ್ನ ಮನೆ ಕಡೆ ನಡೆದಳು.

          ಆದರೆ ಮಾನಸಿಯ ಮನೆಯಲ್ಲಿ ನಡೆದದ್ದೇ ಬೇರೆ.. ಅವಳ ತಂದೆ ತಾಳ್ಮೆ ಕಳೆದುಕೊಂಡು ಅವಳನ್ನು ಹೀನಾಮಾನವಾಗಿ ಬೈದು,ಹಿಗ್ಗಾಮುಗ್ಗ ಥಳಿಸಿದ್ದ. ಮಾನಸಿ ಕಣ್ಣೀರು ಮಿಡಿಯುತ್ತಾ ತನ್ನ ಕೋಣೆ ಸೇರಿದ್ದಳು. ತಾನು ಕಂಡ ಕನಸುಗಳೆಷ್ಟೋ, ಸಾಧಿಸಬೇಕಂದುಕೊಂಡಿದ್ದ ಆಸೆಗಳೆಷ್ಟೋ… ಎಲ್ಲಾ ಮಣ್ಣು ಪಾಲಾಗಿದ್ದವು. ತನ್ನ ವೇದನೆ ಯಾರಲ್ಲೂ ಹೇಳಿಕೊಳ್ಳಲಾರದೆ ಮನದೊಳಗೇ ಕೊರಗತೊಡಗಿದಳು..
ಫಲಿತಾಂಶ ಕಳೆದ ಬಳಿಕ ಹೋದ ಮಾನಸಿ ನಂತರ ಸ್ನೇಹಾಳ ಮನೆ ಕಡೆ ಬಂದಿರಲಿಲ್ಲ. ಕೆಲವು ದಿನಗಳ ಬಳಿಕ ಮರು ಮೌಲ್ಯಮಾಪನದ ಫಲಿತಾಂಶ ಬಂದಿತ್ತು. ಫಲಿತಾಂಶ ತಿಳಿಯಲು ಹೋಗಿದ್ದ ಮಗಳು ಸ್ನೇಹ ಅಕ್ಷರ ಸಹ ಕುಣಿಯುತ್ತಲೇ ಬಂದಿದ್ದಳು. ” ಪಪ್ಪಾ, ಮಾನಸಿಗೆ ಮಾಥ್ಸ್ ನಲ್ಲಿ ೯೨ ಅಂಕ ಬಂದಿದೆ. ಮಾರ್ಕ್ಸ್ ಹೇಗೆ ತಿರುಗಾ ಮುರುಗಾ ಆಗಿತ್ತು ಅಲ್ವಾ..?” ಎಂದಳು ಸಂಭ್ರಮದಿಂದ. ಸುಧಾಕರನಿಗೂ ಹೇಳತೀರದ ಆನಂದ. ಅಂತೂ ಆ ಬಡ ಹುಡುಗಿಯ ಮೆಡಿಕಲ್ ಕನಸು ಹೋಳಾಗಲಿಲ್ಲವಲ್ಲಾ ಎಂದು ಖುಶಿಯಾಯಿತು. ಸ್ನೇಹಾ ತನ್ನ ಮನೆಯೊಳಕ್ಕೂ ಹೋಗದೆ ನೇರವಾಗಿ ಮಾನಸಿಯ ಮನೆ ಹಾದಿ ಹಿಡಿದಳು.
ಸಂತಸದಿಂದ ಗೆಳತಿಯ ಮನೆಗೆ ಬಂದ ಸ್ನೇಹಾಳಿಗೆ ಮನೆಯೊಳಗಿನಿಂದ ಗೋಳಾಟದ ದನಿ ಕೇಳಿದಾಗ ಅವಳ ಗುಂಡಿಗೆಯೊಮ್ಮೆ ನಡುಗಿತು. ಗಾಬರಿಯಿಂದ ಮನೆಯೊಳಕ್ಕೆ ಓಡಿದಳು. ಹಜಾರದಲ್ಲಿ ಯಾರೂ ಕಾಣದಾದಾಗ ಸೀದಾ ಮಾನಸಿಯ ಕೋಣೆಯೊಳಕ್ಕೆ ನುಗ್ಗಿದಳು. ಎಲ್ಲಿರದ ವೇಗದಿಂದ ನುಗ್ಗಿದ್ದ ಸ್ನೇಹಾ ಅಲ್ಲಿನ ದೃಶ್ಯ ಕಂಡು ಆಘಾತಗೊಂಡಳು. ತನ್ನ ಪ್ರಾಣ ಸ್ನೆಹಿತೆಯ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನೇತಾಡುತ್ತಿತ್ತು.. ಅವಳ ತಾಯಿ ಎದೆ ಹೊಡೆದುಕೊಳ್ಳುತ್ತಾ ಕಲ್ಲೂ ಕರಗುವಂತೆ ರೋಧಿಸುತ್ತಿದ್ದರೆ, ತಂದೆ ಶೂನ್ಯದೆಡೆಗೆ ದಿಟ್ಟಿಸುತ್ತಾ ಮಂಕಾಗಿ ನಿಂತಿದ್ದ.. ಸ್ನೇಹಾಳ ಕೈಗಳು ಕಂಪಿಸತೊಡಗಿ ಸಿಹಿ ನೆಲ ಸೇರಿತು. ಮಾನಸಿಯ ಕನಸು ತುಂಬಿದ ಬೊಗಸೆ ಕಂಗಳು, ಮುದ್ದು ಮುಖ ನೆನಪಾಗಿ ಕಣ್ಣು ತುಂಬಿ ಬಂದವು… ವಿಧಿಯ ಕ್ರೂರ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಮನಸಿನ ಗೆಳತಿಯ ನಿಸ್ತೇಜ ಮುಖ ನೋಡುತ್ತಿದ್ದ ಸ್ನೇಹಾ ಕಣ್ಣು ಮಂಜಾಗಿ ನಿಲ್ಲಲಾರದೆ ಕುಸಿದುಬಿದ್ದಳು…..