memories..

ಸೂರ್ಯ ಅಸ್ತಂಗತನಾಗುವ ಸಮಯ..ಬಾನೆಲ್ಲಾ ಓಕುಳಿಯಾಡಿದಂತೆ ಕೆಂಪಾಗಿ ಪ್ರಕೃತಿಯ ಸೊಬಗನ್ನು ಹೆಚ್ಚಿಸಿತ್ತು… ಸಾಗರದ ಅಲೆಗಳು ಗಾಳಿಯ ವೇಗಕ್ಕೆ ತಕ್ಕಂತೆ ಬಳುಕುತ್ತಾ, ದಡದಲ್ಲಿನ ಮರಳನ್ನು ಒದ್ದೆಯಾಗಿಸಿ ಹಿಂದೆ ಸರಿಯುತ್ತಿದ್ದವು… ಆದರೆ ಈ ಎಲ್ಲಾ ರಮಣೀಯ ಸೌಂದರ್ಯದ ನಡುವೆ ನಾನಂತೂ ಇಹ ಲೋಕದ ಪರಿವೆಯೇ ಇಲ್ಲದಂತೆ ಮರಳಿನಲ್ಲಿ ಹೆಸರು ಗೀಚುವುದರಲ್ಲೇ ತಲ್ಲೀನಳಾಗಿದ್ದೆ…

“ಚಂದ್ರು….” ಅದೆಷ್ಟು ಬಾರಿ ಬರೆದರೂ ಸಹ ಸಮಾಧಾನವಿಲ್ಲ.. ‘ಎಷ್ಟಾದರೂ ನನ್ನ ಮುದ್ದು ಹುಡುಗನ ಹೆಸರಲ್ಲವೆ..?!’ ಹಾಗಂದುಕೊಂಡೊಡನೆ ಮನ ಗರಿ ಬಿಚ್ಚಿ ಕುಣಿವ ನವಿಲಾಯಿತು… ಆದರೆ ಇದ್ದಕ್ಕಿದ್ದಂತೆ ಧಾವಿಸಿ ಬಂದ ತೆರೆಯೊಂದು ಬರೆದಿದ್ದ ಹೆಸರನ್ನು ಸಂಪೂರ್ಣವಾಗಿ ಅಳಿಸಿ ಹಾಕಿಬಿಟ್ಟಿತು.. ಕೋಪ ಉಕ್ಕೇರಿತು ಅಲೆಗಳ ಮೇಲೆ… ಇನ್ನೆಲ್ಲಿರದ ರೋಷದಿಂದ ಸಾಗರವನ್ನೇ ದಿಟ್ಟಿಸಿದೆ… “ಅವನು ಅದು ಹೇಗೆ ನಿನ್ನವಳಾಗುತ್ತಾನೆ..??” ಎಂದು ಕುಹಕದಿಂದ ನಗೆಯಾಡುತ್ತಾ ಆ ತೆರೆ ಸಾಗರದೊಳಗೆ ಮರೆಯಾಯಿತು…! ಮನಸ್ಯಾಕೋ ತುಂಬಾ ಭಾರವಾಯಿತು… ನಿಜ…. ಚಂದ್ರು ನನ್ನವನಲ್ಲ….. ನನ್ನವನಲ್ಲ…….!

ನನ್ನ ಬಾಳಿನ ಚೈತನ್ಯವಾಗಿದ್ದ ಚಂದ್ರು.. ನನ್ನ ಉಚ್ವಾಸ-ನಿಶ್ವಾಸಗಳಲ್ಲೂ ಅವನೇ ತುಂಬಿದ್ದ… ಪ್ರತೀ ನಾಡಿ ಮಿಡಿತಗಳಲ್ಲೂ,ಅಣು-ರೇಣುಗಳಲ್ಲೂ ಸೇರಿ ಹೋಗಿದ್ದ… ಅವನಿಗಾಗಿ ನಾನು, ನನಗಾಗಿ ಅವನು… ಈ ಸುಂದರ ಜಗತ್ತಿನಲ್ಲಿ ಅದನ್ನೂ ಮೀರಿಸುವ ಸುಂದರ ಬದುಕು.. ಅದೆಷ್ಟು ಕನಸುಗಳು..? ಅದೆಷ್ಟು ತುಡಿತಗಳು…???

ಆದರೆ ನಾನಂದುಕೊಂಡಂತಹ ಸೌಂದರ್ಯ ನಿನ್ನ ಮನಸಿಗಿರಲಿಲ್ಲ ನೋಡು.. ನಾ ಅತ್ತಾಗ
ಅಪ್ಪಿ ಸಂತೈಸುತ್ತಿದ್ದ ನಿನ್ನಲ್ಲಿ ಅಂತಹಾ ಒಬ್ಬ ವಂಚಕ ಇದ್ದನೇ..? ನನ್ನ ಮನದೊಳಗೆ ನೀನಾಗೆ ಬಂದು, ವರ್ಣಮಯ ಚಿತ್ತಾರ ಬರೆದು ನೀನೆ   ಅಳಿಸಿಬಿಟ್ಟೆಯಲ್ಲೋ ಅದನ್ನ..? ಯಾಕೋ ಬಂದೆ ನನ್ನ ಬದುಕಲ್ಲಿ..?? ಮರಳುಗಾಡಿನಲ್ಲಿಯೇ ಸಂತಸ ಕಂಡಿದ್ದವಳಿಗೆ ಓಯಸಿಸ್ ನ ಆಸೆ ತೋರಿಸಿ, ಅದೇಕೆ ಸುನಾಮಿಯಾಗಿ ಹೋದೆ ಚಂದ್ರು..??

ಇಂದೂ ನಾನು ಅಳುತ್ತಿದ್ದೇನೆ ಚಂದ್ರು.. ಒಬ್ಬಂಟಿಯಾಗಿ….. ನನ್ನೊಳಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೇನೆ….. ಆದರೆ ಯಾವೊಂದು ಕೈಗಳೂ ನನ್ನ ಕಂಬನಿ ಒರೆಸಲು ಇಂದು ಉಳಿದುಕೊಂಡಿಲ್ಲ… ಎಲ್ಲರನ್ನೂ ಕಳೆದುಕೊಂಡೆ ನಿನ್ನ ಮೇಲಿನ ವ್ಯಾಮೋಹದಿಂದ.. ನಂಗೊತ್ತು ಕಣೋ, ನೀನಿಂದು ಇನ್ಯಾವುದೋ ಸಾಗರ ತೀರದಲ್ಲಿ ಇನ್ನೊಬ್ಬಳ ಜೊತೆ ನನ್ನಂತೆಯೇ ಮರಳಿನಲ್ಲಿ ಹೆಸರು ಗೀಚುತ್ತಿರುವೆ ಎಂದು… ಆದರೆ ಒಂದು ಕ್ಷಣವಾದರೂ ನನ್ನನ್ನು ಬಳಸಿ ಹಿಡಿದು ಹೆಸರು ಗೀಚಿದ ನೆನಪು ಬರಲಾರದೆ ನಿನಗೆ..? ಬಾಳಿನ ಪ್ರತೀ ಹೆಜ್ಜೆಯಲ್ಲೂ ಜೊತೆ ಬರುತ್ತೇನೆ ಎಂದವನು ನಡುದಾರಿಯಲ್ಲೇ ಕೈ ಬಿಟ್ಟೆಯಾ ಚಂದ್ರು..??

ಅಲ್ಲಿ ನೋಡು ಚಂದ್ರು… ಅವರೆಲ್ಲಾ ನನ್ನನ್ನ ಅದೆಷ್ಟು ವಿಚಿತ್ರದಂತೆ ನೋಡುತ್ತಿದ್ದಾರೆ..? ಹುಚ್ಚಿ ಅಂದುಕೊಂದಿರಬಹುದೇನೋ..?!! ಎಂತಹಾ ದುರಂತ ನೋಡಿದೆಯಾ..? ನಿನ್ನೋಳಗಿದ್ದ ಕಪಟತನವನ್ನು ಗುರುತಿಸಲಾರದವಳು, ಇನ್ಯಾರದೋ ಹೊರಗಿನವರ ಮನದ ಮಾತುಗಳನ್ನು ಅದೆಷ್ಟು ಚೆನ್ನಾಗಿ ಓದಬಲ್ಲೆ..?!! ಬಲು ಸುಂದರವಾಗಿ ಮೋಸ ಮಾಡಿಬಿಟ್ಟೆ ಅಲ್ಲವೇ..?!!!

ಅದೆಂತಾ ದಟ್ಟ ಕಟ್ಟಲು ತುಂಬಿಕೊಂತಲ್ಲಾ ಚಂದ್ರು..? ನನ್ನ ಬದುಕಿನಂತೆಯೇ….. ನಗುವೆಯಾ ನನ್ನ ನೋಡಿ…? ಗೇಲಿ ಮಾಡುವೆಯಾ ನನ್ನ ಪರಿಸ್ಥಿತಿ ಕಂಡು..? ಅದರ ಅವಶ್ಯಕತೆ ಇಲ್ಲ ಚಂದ್ರು.. ನೀನಂದುಕೊಂಡಂತೆ ಆತ್ಮಹತ್ಯೆಯ ಹಾದಿ ಹಿಡಿಯಲಾರೆ ನಾ.. ಬದುಕಿನ ನಾನಾ ಮಜಲುಗಳನ್ನು ಎದುರಿಸಬಲ್ಲೆ ಎಂದು ಹೊರಟವಳು ಮುಂದಿರುವ ಕಲ್ಲು-ಮುಳ್ಳಿನ ಹಾದಿಗೆ ಹೆದರುವೇನೆ..? ಖಂಡಿತಾ ಇಲ್ಲ… ನಾನಿಂದು ಅಳುತ್ತಿರೋದು ಅಯೋಗ್ಯನೊಬ್ಬನಿಗೆ ನನ್ನ ನಿಷ್ಕಲ್ಮಶ ಪ್ರೀತಿಯನ್ನು ಅರ್ಪಿಸಿದೆನಲ್ಲಾ ಎಂಬ ನೋವಿನಿಂದ… ನೀನು ನನಗೆ ಬೇಕಾಗಿಲ್ಲ ಕಣೋ… ಇನ್ಯಾವತ್ತೂ ಬೇಕಾಗಿಲ್ಲ… ಚಂದ್ರು… ಕತ್ತಲಾದ ಮೇಲೆ ಬೆಳಕು ಬಂದೆ ಬರುತ್ತೆ ಕಣೋ.. ನಾಳೊಂದು ದಿನ ನನ್ನ ಬಾಳಿನ ನಿಜವಾದ ಸೂರ್ಯ ಬಂದೆ ಬರುತ್ತಾನೆ… ಕಾಲಚಕ್ರ ಹೀಗೇ ಇರೋದಿಲ್ಲ ಕಣೋ.. ನೋಡು ಅದು ಹೇಗೆ ತಿರುಗಿ ನಿಲ್ಲುತ್ತೆ ಅಂತ..! ನಾನು ಬದುಕಿ ಸಾಧಿಸುತ್ತೇನೆ ಚಂದ್ರು…ನೀನೇ ನಾಚುವಂತೆ, ಅಸೂಯೆ ಪಡುವಂತೆ ಬದುಕಿ ತೋರಿಸುತ್ತೇನೆ… ನೀ ಬೇಡಿಕೊಂಡರೂ ನಾ ನಿನಗಿನ್ನು ಸಿಗಲಾರೆ ಚಂದ್ರು… ಇನ್ನೆಂದಿಗೂ ಸಿಗಲಾರೆ……

ಸುತ್ತಲೂ ಕವಿದಿದ್ದ ಕಾರ್ಗತ್ತಲನ್ನು ಬೇಧಿಸುತ್ತಾ ಒಂದೊಂದೇ ತಾರೆಗಳು ಆಗಸದಲ್ಲಿ ಫಳಗುಟ್ಟಲು ಪ್ರಾರಂಬಿಸಿದವು… ಅಂಧಕಾರವೇ ತುಂಬಿದ್ದ ಮನದೊಳಗೆ ಮಿಣುಕು ಹುಳವೊಂದು ನುಸುಳಿ ಆಶಾವಾದದ ಕಿಡಿ ಹಚ್ಚಿಸಿತ್ತು… ಹೂ ನಗೆಯೊಂದು ಬಿರಿಯಿತು ನನ್ನ ಮೊಗದಲ್ಲೂ.. ಅಂತ್ಯವಲ್ಲ ಇದು, ಆರಂಭ…..!!